‘ಅಂಧ ಭಕ್ತರಲ್ಲಿ ಹೆಚ್ಚಾಯಿತು ಆತಂಕ’ ತಂದೆ ಬಿಜೆಪಿ ಮಗಳು ಕಾಂಗ್ರೆಸ್;
ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಸ್ವತಃ ನಿಶಾ ಯೋಗೇಶ್ವರ್ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.ತಂದೆ ಸಿ ಪಿ ಯೋಗೇಶ್ವರ್ ಈ ಹಿಂದೆ ಕಾಂಗ್ರೆಸ್ ನಲ್ಲಿದ್ದರು, ಅನಂತರ ಬಿಜೆಪಿ ಸೇರಿದ್ದರು. ಸದ್ಯ ಬಿಜೆಪಿ ಎಂಎಲ್ ಸಿ ಯಾಗಿದ್ದಾರೆ. ತಂದೆಯ ರಾಜಕೀಯ ಹಾದಿಯನ್ನು ಬಿಟ್ಟು ಭಿನ್ನ ದಾರಿಯಲ್ಲಿ ಹೋಗಲು ನಿಶಾ ಮುಂದಾಗಿದ್ದಾರೆ.
ಹಲವು ಬಾರಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಅವರನ್ನು ಭೇಟಿ ಮಾಡಿದ್ದ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿಯೂ ಕೂಡ ಚರ್ಚೆಗಳು ಆಗುತ್ತಿವೆ. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಕೂಡ ಮಾಹಿತಿ ನೀಡಿದ್ದರು. ನಿಶಾ ಅವರು ಕಾಂಗ್ರೆಸ್ ಸೇರುವ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ.
ಈ ಬಗ್ಗೆ ಜಿಲ್ಲೆಯ ಮುಖಂಡರು ಹಾಗೂ ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದರು. ತಾವು ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು, ಇದಕ್ಕೆ ತಮ್ಮ ತಂದೆಯ ಸಹಮತ ಕೂಡ ಇದೆ. ಕಾಂಗ್ರೆಸ್ ಸೇರ್ಪಡೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದಿದ್ದಾರೆ.ಚನ್ನಪಟ್ಟಣದ ಎಲ್ಲ ಜನರು ನನ್ನವರೇ, ಅದರಲ್ಲಿ ಅವರು ಇವರು ಅಂತಾ ಏನಿಲ್ಲ. ನಾನು ಇಲ್ಲಿಯೇ ಬೆಳೆದಿದ್ದು, ಅವರ ಮನೆ ಮಗಳಾಗಿ ಚನ್ನಪಟ್ಟಣದ ಜನರ ನಡುವೆ ನಾನು ಬೆಳೆದಿದ್ದೇನೆ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.
ನನಗೆ ನನ್ನದೇ ಆದ ರಾಜಕೀಯ ಕನಸುಗಳಿವೆ. ರಾಜಕೀಯದಲ್ಲಿ ತಳಮಟ್ಟದಿಂದ ಬೆಳೆದುಬಂದ ನನ್ನ ತಂದೆ ಮಾಡಿದ ಸಾಧನೆ ಕುರಿತು ನನಗೆ ಹೆಮ್ಮೆ ಹಾಗೂ ಗೌರವವಿದೆ. ಅದರಂತೆ, ನನ್ನದೇ ರಾಜಕೀಯ ಹಾದಿ ನಿರ್ಮಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.ಕಾಂಗ್ರೆಸ್ ಸೇರಲು ಈಗಾಗಲೇ ನಿರ್ಧರಿಸಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ನಾಯಕರು ಯಾವಾಗ ಸೇರಿಸಿಕೊಳ್ಳುತ್ತಾರೆಂದು ನಾನು ಸಹ ಕಾಯುತ್ತಿದ್ದೇನೆ ಎಂದು ನಿಶಾ ಯೋಗೇಶ್ವರ್ ತಿಳಿಸಿದ್ದಾರೆ.