ಬಿಗ್ ಬಾಸ್ ಮನೆಯಲ್ಲಿ ಅತಿಯಾಗಿ ವರ್ತಿಸುತ್ತಿರುವ ವಿನಯ್, ಮೌನವಾಗಿ ನೋಡುತ್ತಿರುವ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಈ ಬಾರಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿನಯ್ ಗೌಡ. ತಮ್ಮ ಕೋಪ, ಬೈಗುಳ, ಕಿರುಚಾಟ ಮತ್ತು ಹೆಣ್ಣು ಮಕ್ಕಳ ಜೊತೆಗೆ ನಡೆದುಕೊಳ್ಳುತ್ತಿರುವ ರೀತಿಗೆ ಬಿಗ್ ಬಾಸ್ ವೀಕ್ಷಕರು ಕಿಡಿಕಾರುತ್ತಿದ್ದಾರೆ. ಇದರ ಜೊತೆಗೆ ಮನೆಯಲ್ಲಿರುವ ಇತರ ಸ್ಪರ್ಧಿಗಳು ಕೂಡ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಬಿಗ್ ಬಾಸ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಹೊಸ ಪ್ರೋಮೋ ಬಿಡುಗಡೆ ಮಾಡಿದೆ. ಇಷ್ಟು ದಿನ ಸಂಗೀತಾ ಶೃಂಗೇರಿ ಅವರನ್ನು ಟಾರ್ಗೆಟ್ ಮಾಡಿದ್ದ ವಿನಯ್, ಈ ವಾರದ ಆರಂಭದಲ್ಲಿ ಭಾಗ್ಯಶ್ರೀ ಅವರನ್ನು ಕಣ್ಣೀರು ಹಾಕಿಸಿದ್ದರು, ಈಗ ತನಿಷಾ ಅವರ ಮೇಲೆ ಕಿಡಿಕಾರುತ್ತಿದ್ದಾರೆ. ಹೊಸ ಪ್ರೋಮೋದಲ್ಲಿ ಮತ್ತೆ ವಿನಯ್ ಗೌಡ, ನಟಿ ತನಿಷಾ ಕುಪ್ಪಂಡ ಅವರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.
ಬಿಗ್ ಬಾಸ್’ ಮನೆಯಲ್ಲಿ ಹಳ್ಳಿ ಸೆಟ್ ಹಾಕಲಾಗಿದ್ದು, ಹಳ್ಳಿಯಲ್ಲಿನ ಆಟಗಳು, ಕೆಲಸಗಳನ್ನು ಟಾಸ್ಕ್ ಆಗಿ ನೀಡಲಾಗುತ್ತಿದೆ. ನಿನ್ನೆಯಿಂದಲೂ ವಿನಯ್ ಗೌಡ ಅವರ ಜಗಳ ಜೋರಾಗಿಯೇ ನಡೆಯುತ್ತಿದೆ. ಕಿತ್ತಾಟ, ವಾಗ್ವಾದಗಳು ನಡೆಯುತ್ತಿದ್ದು, ಬಿಗ್ ಬಾಸ್ ಮನೆ ರಣರಂಗವಾಗಿತ್ತು. ಈ ಕುರುಕ್ಷೇತ್ರವನ್ನು ನೋಡಿ ಬಿಗ್ ಬಾಸ್ ಈಗ ಕುಸ್ತಿ ಅಖಾಡವನ್ನೇ ಸಿದ್ಧಡಿಸಿದ್ದಾರೆ.
ಹೌದು…ಬಿಗ್ ಬಾಸ್ ಮನೆಯಲ್ಲಿ ಕುಸ್ತಿ ಅಖಾಡ ಸಿದ್ಧಪಡಿಸಲಾಗಿದ್ದು, ಇಲ್ಲಿಯೂ ಜಗಳ ಆರಂಭವಾಗಿದೆ. ಮಣ್ಣಿನ ಮೇಲೆ ಜಟ್ಟುಗಳ ಹಾಗೆ ಮನೆ ಮಂದಿ ಕುಸ್ಉಯಾಟಕ್ಕೆ ಸಿದ್ಧವಾಗಿದ್ದು, ದೊಡ್ಮನೆಗೆ ಹಿಂತಿರುಗಿರುವ ವರ್ತೂರು ಸಂತೋಷ್ ಕುಸ್ತಿಪಟುವಾಗಿ ಕಣಕ್ಕಿಳಿದ್ದಿದ್ದಾರೆ. ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಅವರ ತಂಡಗಳು ಕುಸ್ತಿ ಆಡುವವರಿಗೆ ಉತ್ಸಾಹ ತುಂಬುತ್ತಿದೆ.
ಇದರ ನಡುವೆ ವಿನಯ್ ಗೌಡ ಹಾಗೂ ತನಿಷಾ ಕುಪ್ಪಂಡ ಮಧ್ಯೆ ವಾಗ್ವಾದ ನಡೆದಿದೆ. ಕುಸ್ತಿ ಕಣದಲ್ಲಿದ್ದ ಸಂಗೀತಾ ಅವರಿಗೆ ತನಿಷಾ ಕುಪ್ಪಂಡ ಉತ್ಸಾಹ ತುಂಬುತ್ತಿದ್ದರು. ಹೇಗೆ ಆಟ ಆಡುವುದು ಎಂಬುದನ್ನು ಹೇಳಿಕೊಡುತ್ತಿದ್ದರು. ಈ ವೇಳೆ ಸುಮ್ಮನಿರದ ವಿನಯ್ ಗೌಡ, ನೀವೇ ಬಟ್ಟೆ ಬದಲಾಯಿಸಿಕೊಂಡು ಕಣಕ್ಕೆ ಇಳಿಯಿರಿ ಎಂದು ಕೆಣಕಿದ್ದಾರೆ. ಆಟ ಆಡುವವರು ಮಾತಾಡುತ್ತಾರೆ ಸುಮ್ಮನಿರಿ ಎಂದು ತನಿಷಾ ಹೇಳಿದರೂ ಕೂಡ, ಏನೇ ನಿಂದು ಎಂದು ಏಕವಚನದಲ್ಲಿಯೇ ಕಿರುಚಾಡಿದ್ದಾರೆ.
ವಿನಯ್ ಮಾತಿಗೆ ರೊಚ್ಚಿಗೆದ್ದ ತನಿಷಾ ಕೂಡ ಏಕವಚದಲ್ಲಿ ಮಾತಾಡಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ನಿನ್ನೆ ಕೂಡ ಹೆಣ್ಣು ಮಕ್ಕಳನ್ನು ಹಂಗಿಸುವ ಹಾಗೆ ಕಾರ್ತಿಕ್‌ಗೆ ‘ಬಳೆ ಹಾಕಿಕೊ’ ಎಂದೆಲ್ಲಾ ಮಾತನಾಡಿದ್ದರು. ಇನ್ನು, ಪ್ರೋಮೋಗೆ ವೀಕ್ಷಕರು ಕೂಡ ಅಭಿಪ್ರಾಯ ಹೊರ ಹಾಕುತ್ತಿದ್ದು, ತನಿಷಾಗೆ ಬೆಂಬಲ ನೀಡುತ್ತಿದ್ದಾರೆ.