• Uncategorised

ಜಗತ್ತನ್ನೇ ನಡುಗಿಸುತ್ತಿದ್ದ ವೆಸ್ಟ್ ಇಂಡೀಸ್ ಪತನವಾಗಿದ್ದು ಹೇಗೆ, ಇಲ್ಲಿದೆ ರೋಚಕ ಸ್ಟೋರಿ

13ನೇ ಆವೃತ್ತಿಯ ಏಕದಿನ ವಿಶ್ವ ಕಪ್​ನಲ್ಲಿ ಸ್ಪರ್ಧಿಸುವ ಅವಕಾಶ ಒಂದು ಕಾಲದ ಕ್ರಿಕೆಟ್​ ದೈತ್ಯ ರಾಷ್ಟ್ರ ವೆಸ್ಟ್ ಇಂಡೀಸ್​​ಗೆ ಸಿಗಲೇ ಇಲ್ಲ. ಅರ್ಹತಾ ಸುತ್ತಿನ ಟೂರ್ನಿಯ ಸೂಪರ್​ ಸಿಕ್ಸ್​ ಹಂತದಲ್ಲಿ ದುರ್ಬಲ ಸ್ಕಾಟ್ಲೆಂಡ್ ವಿರುದ್ಧ ಹೀನಾಯ 7 ವಿಕೆಟ್​​ಗಳ ಸೋಲಿಗೆ ಒಳಗಾಗುವುದರೊಂದಿಗೆ ವಿಂಡೀಸ್​ ಕ್ರಿಕೆಟ್​ನ ಹುಳುಕುಗಳು ಬಹಿರಂಗಗೊಂಡಿವೆ. ಚಿಂತಾಜನಕ ಸ್ಥಿತಿಯಲ್ಲಿ ಐಸಿಯು ಸೇರಿಕೊಂಡಿದ್ದ ವಿಂಡೀಸ್​ ತಂಡದ ವೆಂಟಿಲೇಟರ್​ ಅನ್ನು ಸ್ಕಾಟ್ಲೆಂಡ್​ ತಂಡ ಕಿತ್ತು ಹಾಕಿದ ಹಾಗಾಗಿದೆ. ಒಟ್ಟಿನಲ್ಲಿ ವಿಂಡೀಸ್​ ಕ್ರಿಕೆಟ್​ನ ಈ ಕರುಣಾಜನಕ ಕತೆ ವಿಶ್ವ ಕ್ರಿಕೆಟ್​ ಕ್ಷೇತ್ರದೊಂದು ದೊಡ್ಡ ಪಾಠ.

48 ವರ್ಷಗಳ ಏಕದಿನ ಕ್ರಿಕೆಟ್ ವಿಶ್ವ ಕಪ್​ ಇತಿಹಾಸದಲ್ಲಿ ವೆಸ್ಟ್​ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ಪ್ರಮುಖ ಹಂತಕ್ಕೆ ಪ್ರವೇಶ ಪಡೆಯಲು ವಿಫಲಗೊಂಡಿತು ಎಂಬುದು ಅಚ್ಚರಿಯ ಸಮಾಚಾರ. 2019ರಲ್ಲಿ ಇಂಗ್ಲೆಂಡ್​ನಲ್ಲಿ ಆಯೋಜನೆಗೊಂಡಿದ್ದ ಏಕದಿನ ವಿಶ್ವ ಕಪ್ ಬಳಿಕ ನಡೆದ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ವಿಫಲಗೊಂಡಿದ್ದ ವಿಂಡೀಸ್​ ತಂಡ ರ‍್ಯಾಂಕ್‌ ಆಧಾರದಲ್ಲಿ ನೇರ ಅರ್ಹತೆ ಪಡೆದಿರಲಿಲ್ಲ. ಇದೀಗ ಅರ್ಹತಾ ಟೂರ್ನಿಯಲ್ಲೂ ಮುಗ್ಗರಿಸಿ ಭಾರವಾದ ಹೃದಯದೊಂದಿಗೆ ನಿರ್ಗಮಿಸಿದೆ.

ವೆಸ್ಟ್​ ಇಂಡೀಸ್ ತಂಡ 70, 80 ಹಾಗೂ 90ರ ದಶಕದ ಆರಂಭದಲ್ಲಿ ಕ್ರಿಕೆಟ್​ ಕ್ಷೇತ್ರದ ಸಾಮ್ರಾಟ ಎನಿಸಿಕೊಂಡಿತ್ತು. 1975 ಮತ್ತು 1979ರಲ್ಲಿ ಸತತವಾಗಿ ಎರಡು ಬಾರಿ ವಿಶ್ವ ಕಪ್​ ಗೆದ್ದುಕೊಂಡಿತಲ್ಲದೆ, 1983ರಲ್ಲೂ ಫೈನಲ್​ಗೆ ತಲುಪಿ ಕಪಿಲ್​ ದೇವ್​ ಸಾರಥ್ಯದ ಭಾರತ ತಂಡದ ವಿರುದ್ಧ ಸೋತು ರನ್ನರ್​ಅಪ್​ ಸ್ಥಾನ ಪಡೆದುಕೊಂಡಿತ್ತು. ಆ ಬಳಿಕವೂ ಜಮೈಕಾ, ಬಾರ್ಬಡೋಸ್, ಗಯಾನಾ, ಆಂಟಿಗುವಾ, ಟ್ರಿನಿಡಾಡ್ ಮತ್ತು ಟೊಬಾಗೊದ ದೈತ್ಯ ಕ್ರಿಕೆಟಿಗರು ದೀರ್ಘ ಕಾಲ ಕ್ರಿಕೆಟ್​ ಕ್ಷೇತ್ರವನ್ನು ಆಳಿದ್ದರು.

ಗತ ವೈಭವದಲ್ಲಿದ್ದ ವಿಂಡೀಸ್ ಕ್ರಿಕೆಟ್​ ಪತನದ ಹಾದಿಗೆ ಹೊರಳಿದ್ದು ಕಳೆದೆರಡು ದಶಕಗಳಿಂದ. ಅದಕ್ಕೆ ಪ್ರಮುಖ ಕಾರಣ ಅಲ್ಲಿನ ಕ್ರಿಕೆಟ್ ಮಂಡಳಿಯ ಬೇಜವಾಬ್ದಾರಿ. ವೆಸ್ಟ್​ ಇಂಡೀಸ್ ಕ್ರಿಕೆಟ್​ ಈಗ ನಾನಾ ರೀತಿಯ ಸಮಸ್ಯೆಯಿಂದ ಬಳಲುತ್ತಿದೆ. ಹಣಕಾಸು ನಿರ್ವಹಣೆಯಲ್ಲಿ ಸಂಪೂರ್ಣ ಸೋತಿದೆ. ಆಟಗಾರರಿಗೆ ಉತ್ತಮ ವೇತನ ಕೊಡಲೂ ಆಗುತ್ತಿಲ್ಲ. ಹೀಗಾಗಿ ಒಬ್ಬೊಬ್ಬರೇ ಕ್ರಿಕೆಟ್​ ಮಂಡಳಿಯ ಜತೆಗಿನ ಸಂಬಂಧ ಕಳಚಿಕೊಂಡರು. ಇವೆಲ್ಲದರ ನಡುವೆಯೂ 2012 ಮತ್ತು 2016ರ ಟಿ20 ವಿಶ್ವ ಕಪ್​ ಎತ್ತಿ ಹಿಡಿದಿತ್ತು ಕೆರಿಬಿಯನ್​ ಬಳಗ.

ಸೂಕ್ತ ಸಂಭಾವನೆ ಪಡೆಯದೇ, ಸಮಸ್ಯೆಗಳ ನಡುವೆ ವಿಂಡೀಸ್ ಪತಾಕೆಯಡಿ ಆಡಲು ಅಲ್ಲಿನ ಆಟಗಾರರು ಆಡಲು ಮುಂದಾಗುತ್ತಿಲ್ಲ. ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಕ್ರಿಕೆಟ್​ ಲೀಗ್​​ಗಳ ಕಡೆಗೆ ಅಲ್ಲಿಯ ಆಟಗಾರರು ಆಕರ್ಷಿತರಾಗಿದ್ದಾರೆ. ದೇಶೀಯ ಮತ್ತು ರಾಷ್ಟ್ರೀಯ ತಂಡದ ಬಗ್ಗೆ ಕಾಳಜಿ ಮೂಡಿಸುವಲ್ಲಿ ಅಲ್ಲಿ ಕ್ರಿಕೆಟ್ ಮಂಡಳಿ ವಿಫಲಗೊಂಡಿದೆ. 13 ದ್ವೀಪಗಳನ್ನು ಹೊಂದಿರುವ ರಾಷ್ಟ್ರದ ​ ಕ್ರಿಕೆಟ್​ ತಂಡಕ್ಕೆ ಸಮರ್ಥ ಆಟಗಾರರನ್ನು ಹುಡುಕಲು ಸಾಧ್ಯವಾಗಲಿಲ್ಲ. ನಿರೀಕ್ಷೆಯಂತೆ ವಿಂಡೀಸ್ ತಂಡ ಪಾತಾಳ ಕಚ್ಚಿದೆ. ಕ್ಲೈವ್​ ಲಾಯ್ಡ್​, ಇಯಾನ್​ ಬಿಷಪ್​, ಮಾಲ್ಕಮ್​ ಮಾರ್ಷಲ್​, ಗ್ಯಾರಿಫೀಲ್ಡ್​ ಸೋಬರ್ಸ್​, ವಿವಿಯನ್ ಡಿಚರ್ಡ್ಸ್​, ಕರ್ಟ್ಲಿ ಆಂಬ್ರೋಸ್​, ಚಂದ್ರಪಾಲ್​, ಕರ್ಟ್ನಿ ವಾಲ್ಶ್, ಬ್ರಿಯಾನ್​ ಲಾರಾ ಅವರಂಥ ಕ್ರಿಕೆಟ್ ದಿಗ್ಗಜರನ್ನು ನೋಡಿದ ತಂಡ ಬಿಕ್ಕಳಿಸುತ್ತಾ ಕುಳಿತಿದೆ.

ನೈಜ ಕ್ರಿಕೆಟ್​ ಬಗ್ಗೆ ಅಸಡ್ಡೆ ತೋರಿ ಟಿ20, ಟಿ10ನಂತಹ ಚುಟುಕು ಕ್ರಿಕೆಟ್​ಗಳತ್ತ ಗಮನ ಕೊಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ವಿಶ್ವ ಕ್ರಿಕೆಟ್​ನಲ್ಲಾಗುತ್ತಿರುವ ದೊಡ್ಡ ಬೆಳವಣಿಗೆ. ಈ ತಪ್ಪಿನ ಮೊದಲ ಬಲಿಪಶು ವಿಂಡೀಸ್​ ತಂಡ ಎಂದುಕೊಂಡರೆ, ಮುಂದೆ ಹಲವು ದೇಶಗಳಿಗೆ ಇದೇ ಸಮಸ್ಯೆ ಎದುರಾಗುವುದು ನಿಶ್ಚಿತ. ಇದಕ್ಕೆ ಭಾರತವೂ ಹೊರತಲ್ಲ. ಜಾಗತಿಕ ಕ್ರಿಕೆಟ್​ನ ನಿಯಂತ್ರಕ ಸಂಸ್ಥೆ ಐಸಿಸಿ ಹಾಗೂ ಆಯಾ ದೇಶಗಳ ಕ್ರಿಕೆಟ್​ ಸಂಸ್ಥೆಗಳು ಈ ಕ್ಷಣದಿಂದಲೇ ಸುಧಾರಣೆ ಕಡೆಗೆ ಹೆಜ್ಜೆ ಇಟ್ಟರೆ ಜಂಟಲ್​ಮ್ಯಾನ್​ ಗೇಮ್​ ಇನ್ನಷ್ಟು ವರ್ಷ ಬಾಳಬಹುದು.

You may also like...