ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಸಂಭ್ರಮ, ರಚಿತಾ ರಾಮ್ ಜೊತೆ ಜೊತೆ ನಟ ಧನ್ವೀರ್ ಮದುವೆ ಮಾತು
ಚಿತ್ರರಂಗದಲ್ಲಿ ಗುಲ್ಲುಗಳಿಗೆ ಕಡಿಮೆ ಇಲ್ಲ. ಅದರಲ್ಲಿಯೂ ನಟ, ನಟಿಯರ ಮದುವೆ ಸುದ್ದಿ ಯಾವಾಗಲೂ ಸಂಚಲನ ಸೃಷ್ಟಿಸುತ್ತಿರುತ್ತದೆ. ಈಗ ಸ್ಯಾಂಡಲ್ ವುಡ್ನಲ್ಲಿ ಮದುವೆಯ ಸುದ್ದಿಯೊಂದು ಇದ್ದಕ್ಕಿದ್ದಂತೆ ಹರಿದಾಡತೊಡಗಿದೆ. ಅದೂ ಕನ್ನಡದ ಮುಂಚೂಣಿಯ ನಟಿಯರಲ್ಲಿ ಒಬ್ಬರಾದ ರಚಿತಾ ರಾಮ್ ಅವರದ್ದು.
ಗುಳಿಕೆನ್ನೆ ಸುಂದರಿ ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಅವರ ಮದುವೆ ಸಂಗತಿ ಮುನ್ನೆಲೆಗೆ ಬಂದಿರುವುದು ಇದು ಮೊದಲ ಸಲವೇನಲ್ಲ. ಬುಲ್ ಬುಲ್ ಬೆಡಗಿಯ ಮದುವೆಯ ಸಂಗತಿ ಕೆಲವು ತಿಂಗಳ ಹಿಂದೆಯೂ ಮಾತುಗಳು ಕೇಳಿಬಂದಿದ್ದವು.
ಈ ಹಿಂದೆ ಶೃಂಗೇರಿಯಲ್ಲಿ ದೇವೇಗೌಡರ ಕುಟುಂಬ ನಡೆಸಿದ್ದ ಚಂಡಿಕಾಯಾಗದಲ್ಲಿ ರಚಿತಾ ಭಾಗವಹಿಸಿದ್ದರು . ಆಗ ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ನಡುವೆ ಮದುವೆ ನಿಶ್ಚಯವಾಗಿದೆ ಎಂಬ ಗುಸು ಗುಸು ಹರಡಿಸಿತ್ತು. ಆದರೆ ಇದಕ್ಕೆ ರಚಿತಾ ಸ್ಪಷ್ಟನೆ ನೀಡಿದ್ದರು. ನಿಖಿಲ್ ಮತ್ತು ರೇವತಿ ವಿವಾಹ ನಿಶ್ಚಯವಾಗಿ ಲಾಕ್ ಡೌನ್ ನಡುವೆ ಮದುವೆಯೂ ನಡೆದು ಅವರಿಗೆ ಈಗ ಪುಟ್ಟ ಮಗನೂ ಕೂಡ ಇದ್ದಾನೆ.
ಇನ್ನು ಈಗ ಚಿತ್ರರಸಿಕರ ನೆಚ್ಚಿನ ನಟಿ ರಚಿತಾ ರಾಮ್ ಮದುವೆ ವಿಚಾರವಾಗಿ ಮತ್ತೊಂದು ಸುತ್ತಿನ ಗಾಳಿಸುದ್ದಿ ಹರಿದಾಡುತ್ತಿದೆ. ಅದಕ್ಕೆ ಕಾರಣವಾಗಿರುವುದು ಒಂದು ಸೆಲ್ಫಿ ಫೋಟೊ.ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳಿಂದ ಸೆಲ್ಫಿ ಫೋಟೊವೊಂದು ವೈರಲ್ ಆಗಿದೆ. ಅದರಲ್ಲಿ ರಚಿತಾ ರಾಮ್ ಮತ್ತು ನಟ ಧನ್ವೀರ್ ಗೌಡ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಮದುವೆಯ ಕುರಿತಾದ ವದಂತಿ ಹರಡಲು ಕಾರಣವಾಗಿದೆ. ಇದೀಗ ಧನ್ವೀರ್ ಅಭಿನಯದ ಕೈವಾ ಸಿನೆಮಾ ರಿಲೀಸ್ ಆಗಲಿದ್ದು ಈ ಸಿನೆಮಾ ಸಂದರ್ಶನದಲ್ಲಿ ಈ ವಿಷಯ ಮತ್ತೊಮ್ಮೆ ಟ್ರೆಂಡ್ ಆಗಿದೆ.