61 ವರ್ಷ ಮುದುಕನೇ ಬೇಕೆಂದು ಪಟ್ಟು ಹಿಡಿದು ಮದುವೆಯಾದ 18ರ ಯುವತಿ

ಕೆಲವರು ಪ್ರೀತಿ ಮಾಯೆಂದರೆ ಇನ್ನೂ ಕೆಲವರು ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತ ಹಿರಿಯರು ಹೇಳುತ್ತಾರೆ. ಆದರೆ ಹೀಗೂ ದೇವರು ನಿಶ್ಚಯ ಮಾಡಿರುತ್ತಾರಾ ಎಂಬ ಪ್ರಶ್ನೆ ಮೂಡುವಂತೆ ಕೆಲವರು ಜೋಡಿಗಳಾಗಿರುತ್ತಾರೆ. ಅಂತಹದೊಂದು ಜೋಡಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ಜೋಡಿಗಳ ಹೆಸರು ಶಂಶಾದ್ ಮತ್ತು ಆಸಿಯಾ.

ಪಾಕಿಸ್ತಾನ್ ಮೂಲದ ಈ ಪ್ರೇಮಪಕ್ಷಿಗಳು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದರಲ್ಲೇನು ವಿಶೇಷ ಎಂದರೆ, ಇಲ್ಲಿ ವಧುವಿನ ವಯಸ್ಸು 18 ಹಾಗೂ ವರನ ವಯಸ್ಸು ಬರೋಬ್ಬರಿ 61 ವರ್ಷ. ಈ ಜೋಡಿಗಳ ವಿವಾಹದ ಸುದ್ದಿ ವೈರಲ್ ಆಗುತ್ತಿದ್ದಂತೆ ಮತ್ತೊಮ್ಮೆ ಪ್ರೀತಿ ಕುರುಡು ಎನ್ನುವ ಕ್ಲೀಷೆ ಡೈಲಾಗ್​ ಕೇಳಿ ಬರಲಾರಂಭಿಸಿದೆ. ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಶಂಶಾದ್​ರನ್ನು ಪ್ರೀತಿಸಿ ವಿವಾಹವಾಗಿದ್ದು ಆಸಿಯಾ ಎಂಬುದು.

ಅಂದರೆ ಇದು ಒತ್ತಾಯದ ಮದುವೆಯಲ್ಲ. ಬದಲಾಗಿ ಯುವತಿಯೇ ದಂಬಾಲು ಬಿದ್ದು ವಿವಾಹವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಹೌದು ರಾವಲ್ಪಿಂಡಿ ಮೂಲದ ಆಸಿಯಾ ತನಗಿಂತ 43 ವರ್ಷ ಹಿರಿಯ ವ್ಯಕ್ತಿಯೊಬ್ಬರಿಂದ ಆಕರ್ಷಿತರಾಗಿದ್ದರು. ಇದಕ್ಕೆ ಕಾರಣ ಶಂಶಾದ್ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು. ಶಂಶಾದ್ ಅವರು ರಾವಲ್ಪಿಂಡಿಯಾದ್ಯಂತ ಬಡ ಹುಡುಗಿಯರನ್ನು ಮದುವೆ ಮಾಡಿಸುತ್ತಿದ್ದರು. ಅಲ್ಲದೆ ಅನೇಕ ಬಡವರಿಗೆ ನೆರವಾಗುತ್ತಿದ್ದರು.

ಹೀಗೆ ಆಸಿಯಾ ಅವರ ಊರಿನಲ್ಲೂ ಒಂದಷ್ಟು ಹೆಣ್ಣು ಮಕ್ಕಳ ವಿವಾಹ ಮಾಡಿಸಿದ್ದಾರೆ. ಶಂಶಾದ್ ಅವರ ಈ ಸಮಾಜ ಸೇವೆಯಿಂದ ಪುಳಕಿತರಾಗಿದ್ದ ಆಸಿಯಾಗೆ ಅವರ ಮೇಲೆ ಪ್ರೇಮಾಂಕುರವಾಗಿದೆ.ಹೀಗಿರುವಾಗ ಒಂದೆರಡು ಬಾರಿ ಶಂಶಾದ್ ಅವರನ್ನು ಆಸಿಯಾ ಭೇಟಿಯಾಗಿದ್ದಾರೆ. ಅವರು ತುಂಬಾ ನಿರಾಳವಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು.

ಅಲ್ಲದೆ ಸ್ಥಳೀಯ ಜನರು ಸಹ ಅವರ ಗುಣಗಾನ ಮಾಡುತ್ತಿದ್ದರು. ಹೀಗೆ ಅವರ ಬಗ್ಗೆ ಎಲ್ಲೆಡೆಯುವ ಅತ್ಯುತ್ತಮ ಅಭಿಪ್ರಾಯವಿತ್ತು. ಹೀಗಾಗಿ ಆಸಿಯಾ ತನ್ನ ಮನದ ಇಂಗಿತವನ್ನು ಶಂಶಾದ್ ಅವರಿಗೆ ತಿಳಿಸಿದ್ದರು. ದಿನ ಕಳೆದಂತೆ ಇಬ್ಬರ ನಡುವೆಯೂ ಪ್ರೇಮಾಂಕುರವಾಗಿ ಮದುವೆಯಾಗಿದೆ.

You may also like...